An Ode to Federer and Nadal in Kannada

A poem I had written when the rivalry between Federer and Nadal was at its fiercest. They are locking horns today again, and no better time to publish it...



ಫೆಡರರ್ ಮತ್ತು ನಡಾಲ್ ನಡುವಣ ಪೈಪೋಟಿ ಉತ್ತುಂಗದಲ್ಲಿದ್ದ ಕಾಲದಲ್ಲಿ ಬರೆದ ಒಂದು ಪದ್ಯ:

ಯೋಧರೀರ್ವರು ಬಂದು ನಿಂತರು
ಮಧ್ಯೆ ಪರದೆಯ ಅಂಕಣ
ಮತ್ತೆ ಸೆಣೆಸಲು ಸಿದ್ಧರಿದ್ದರು
ಕಟ್ಟಿ ಗೆಲುವಿನ ಕಂಕಣ

ಓರ್ವನವರಲಿ ಸವ್ಯಸಾಚಿ
ಜಗವನೆಲ್ಲವ ಗೆದ್ದವ
ಪಂದ್ಯಕಲೆಯೋ ಮಕ್ಕಳಾಟವೊ
ಭಿನ್ನವರಿಯದೆ ನುರಿತವ

ಹಿಮದ ಬೆಟ್ಟದ ಹಸಿರು ತಪ್ಪಲ
ಹಸುಗಳೊಟ್ಟಿಗೆ ಬೆಳೆದವ
ಹಸುಳೆತನವನು ಪ್ರತಿಭೆಯನ್ನು
ಹಸನು ಮಾಡುತ ಕಳೆದವ

ಎರಡನವನೂ ಕಡಿಮೆಯಿಲ್ಲ
ಗರಡಿ ಸಾಮಿನ ಗಟ್ಟಿಗ
ಉಸಿರ ಬಿಡುವೆನು ಸೋಲನೊಪ್ಪೆನು
ಎಂಬ ಧ್ಯೇಯದ ಜಟ್ಟಿಗ

ಗೂಳಿಕಾಳಗ ನಡೆಸಿ ಮಣಿಸುವ
ಕೆಂಪು ಮಣ್ಣಲಿ ಹುಟ್ಟಿದ
ಬೆವರ ಸುರಿಸುತ ಬಿದ್ದು ಏಳುತ
ಜಯದ ಹಾದಿಯ ಮೆಟ್ಟಿದ

ಜನರು ನೆರೆವರು ಮುಗಿದು ಬೀಳ್ವರು
ಸತ್ತ್ವದಾಟವ ನೋಡಲು
ಗೆಲುವನೊಬ್ಬನು ಸೋಲ್ವನೊಬ್ಬನು
ಮುಂದುವರಿವುದು ಕಾಳಗ

ವೆಂಕಟೇಶಪ್ರಸನ್ನ

Comments